ಕೌಲಿ, ಏಬ್ರಹಾಂ
1618-1667. ಆಂಗ್ಲಕವಿ. ಪ್ರಬಂಧಕಾರ, ಆಧ್ಯಾತ್ಮಿಕ ಕವಿಗಳಲ್ಲಿ ಅತಿಚತುರನೆನಿಸಿದವ. ಲೇಖನ ಸಾಮಗ್ರಿಗಳನ್ನು ಮಾರಾಟ ಮಾಡುವವನ ಮಗನಾದ ಈತ ಹುಟ್ಟಿದ್ದು ಲಂಡನ್ನಿನಲ್ಲಿ. ಸ್ಟೆನ್ಸರನ ಕೃತಿಗಳಿಂದ ಪ್ರಭಾವಿತವಾಗಿ ಹತ್ತನೆಯ ವಯಸ್ಸಿನಲ್ಲೇ ಪದ್ಯರಚನೆಗೆ ತೊಡಗಿದ. ಹದಿನೈದನೆಯ ವಯಸ್ಸಿನವನಿದ್ದಾಗ ಪೊಯೆಟಿಕ್ ಬ್ಲಾಸಮ್ಸ್ (1633) ಎಂಬ ಕವನಸಂಕಲನವನ್ನು ಪ್ರಕಟಿಸಿದ. 20ನೆಯ ವಯಸ್ಸಿನಲ್ಲಿ ಲವ್ಸ್ ರಿಡ್ಲ್ ಎಂಬ ಗ್ರಾಮೀಣ ನಾಟಕವೊಂದನ್ನು ಹೊರತಂದ. ವೆಸ್ಟ್‍ಮಿನಿಸ್ಟರ್ ಶಾಲೆಯನ್ನು ಪೂರೈಸಿ ಕೇಂಬ್ರಿಜ್ ಸೇರಿದ. ತನ್ನ ಭಾಷಾಂತರ ನೈಪುಣ್ಯದಿಂದ ಅಲ್ಲಿಯ ಫೆಲೋ ಆಗಿ ನೇಮಕಗೊಂಡ. ಆಗ ನಡೆದ ದೇಶದ ಅಂತರ್ಯುದ್ಧದಲ್ಲಿ ರಾಜಪಕ್ಷ ಸೇರಿದನೆಂದು ಕೌಲಿಯನ್ನು ಕಾಲೇಜಿನಿಂದ ಹೊರಹಾಕಲಾಯಿತು. 1646ರಲ್ಲಿ ರಾಣಿಯ ಜೊತೆಯಲ್ಲಿ ಪ್ಯಾರಿಸ್ಸಿಗೆ ಹೋಗಿ ಅಲ್ಲಿ 10-12 ವರ್ಷಗಳಿದ್ದು ರಾಜಮನೆತನಕ್ಕೆ ನಿಷ್ಠೆಯಿಂದ ಸೇವೆಸಲ್ಲಿಸಿದ. ದೇಶದಲ್ಲಿ ಶಾಂತಿ ನೆಲಸಿದ ಮೇಲೆ ರಾಜನಿಷ್ಠೆಯನ್ನು ವ್ಯಕ್ತಪಡಿಸಿದ ಕೆಲವು ಪದ್ಯಗಳನ್ನು ಬರೆದ. ಅನಂತರ ಲಂಡನ್ನಿಗೆ ವಾಪಸಾಗಿ ರಾಜಮನೆತನಕ್ಕೆ ಸೇರಿದ ಭೂಮಿಯನ್ನು ಗುತ್ತಿಗೆ ಪಡೆದ. ಆದರೆ ಲಂಡನಿನಲ್ಲಿ ಬಯಸಿದ ಸೌಖ್ಯ ದೊರಕದೆ ದುಃಖಿತನಾದ. ಈತ ತನ್ನ ಸಮಕಾಲೀನ ಕವಿಗಳೆಲ್ಲರಿಗಿಂತ ಹೆಚ್ಚಿನ ಖ್ಯಾತಿಯನ್ನು ಗಳಿಸಿದ್ದ. ಈತನ ಬಹುತೇಕ ಕವನಗಳಲ್ಲಿ ವಾಕ್ಚಾತುರ್ಯವೇ ಪ್ರಧಾನವಾಗಿ ಕಂಡರೂ ಕೆಲವು ಕವನಗಳಲ್ಲಿ ಪ್ರಕೃತಿವರ್ಣನೆಗಳು ಸುಂದರವಾಗಿ ಬಂದಿವೆ. ದಿ ಮಿಸ್ಟ್ರೆಸ್ (1646), ಪಿಂಡಾರಿಕ್ ಓಡ್ಸ್ (1656) ಈ ಕವನಸಂಕಲನಗಳಲ್ಲಿ ಅನೇಕ ಉತ್ತಮ ಕವನಗಳಿವೆ. ಜಾನ್‍ಸನ್ನನ ಲೈವ್ಸ್ ಆಫ್ ದಿ ಪೊಯೆಟ್ಸ್ ಗ್ರಂಥದಲ್ಲಿ ಈತನದೇ ಮೊದಲ ಹೆಸರು. ಈತನ ಗದ್ಯಪ್ರಬಂಧಗಳು ಸರಳವಾಗಿದ್ದು ಹೆಚ್ಚಿನ ಹೊಗಳಿಕೆಗೆ ಪಾತ್ರವಾಗಿವೆ. ವೆಸ್ಟ್‍ಮಿನಿಸ್ಟರ್ ಆಬೆಯಲ್ಲಿ ಸ್ಟೆನ್ಸರನ ಬಳಿಯೇ ಈತನನ್ನು ಸಮಾಧಿ ಮಾಡಲಾಗಿದೆ. 
									   (ಎನ್.ಎಸ್.ಎಲ್.)

ಇವನು ಮೆಟಫಿಸಿಕಲ್ ಕವಿಗಳಲ್ಲಿ ಒಬ್ಬ. ಇವನ ಕವನಗಳಲ್ಲಿ ಉತ್ಪ್ರೇಕ್ಷ ಹೆಚ್ಚು ಕೃತಕ ಹೊಳಪು ಕಾಣುತ್ತದೆ. ಇವನು ಕೆಲವು ಒಳ್ಳೆಯ ಪ್ರಬಂಧಗಳನ್ನು ಬರೆದಿದ್ದಾನೆ.										
ಪರಿಷ್ಕರಣೆ:
ಎಲ್. ಎಸ್. ಶೇಷಗಿರಿರಾವ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ